ಟೋಗೋ
ಪಶ್ಚಿಮ ಆಫ್ರಿಕದ ಒಂದು ಗಣರಾಜ್ಯ. ಉತ್ತರದಲ್ಲಿ. ಉತ್ತರ ವೋಲ್ಟ. ಪೂರ್ವದಲ್ಲಿ ದಹೋಮೀ. ದಕ್ಷಿಣದಲ್ಲು ಬೆನೆನ್ ಕೊಲ್ಲಿ. ಪಶ್ಚಿಮದಲ್ಲಿ ಘಾನ-ಇವು ಟೋಗೋವನ್ನು ಸುತ್ತುವರಿದಿವೆ. ಈ ಸಣ್ಣ ರಾಜ್ಯ ದಕ್ಷಿಣದ ಗಿನಿ ಖಾತರಿಯಿಂದ ಉತ್ತರಕ್ಕೆ ಸು. 340 ಮೈ. ವ್ಯಾಪಿಸಿದೆ. ಇದಕ್ಕೆ ಸೇರಿದ ಕಡಲತೀರದ ಕೇವಲ 35  ಮೈ. (56 ಕಿಮೀ.) ನಾಡಿನ ಗರಿಷ್ಠ ಅಗಲ ಸು. 70 ಮೈ. ವಿಸ್ತೀರ್ಣ 21,853 ಚ.ಮೈ. ಜನಸಂಖ್ಯೆ 19,55,916 (1970). ಆಡಳಿತ ಕೇಂದ್ರ ಲೋಮೇ. 
ಟೋಗೋದ ದಕ್ಷಿಣದ ತೀರಪ್ರದೇಶ ತಗ್ಗು ಹಾಗು ಜೌಗು. ಕಡಲಂಚಿನಲ್ಲಿ ಮರಳುದಿಬ್ಬಗಳಿಂದ ಕೂಡಿದ ಲಗೂನ್‍ಗಳು ಹೆಚ್ಚಾಗಿವೆ. ಕರಾವಳಿಯಿಂದ ಉತ್ತರಕ್ಕೆ ಸು. 300' ಎತ್ತರದ ಜಂಬುಮಣ್ಣಿನ ಗುಡ್ಡ ಸಾಲುಗಳು 20-40 ಮೈ. ದೂರ ವ್ಯಾಪಿಸಿವೆ. ಇವುಗಳಾಚೆ ಸ್ಫಟಿಕಶಿಲೆಯ ಬೆಟ್ಟಗಳು ಹಾಗೂ ಜೇಡಿಮಣ್ಣಿನ ಸಮತಲಭೂಮಿ ಹರಡಿದೆ. ಅಟಕೋಟ ಪರ್ವತಶ್ರೇಣಿ ನೈಋತ್ಯದಿಂದ. ಈಶಾನ್ಯಕ್ಕೆ ಹಬ್ಬಿದೆ. ಈ ಶ್ರೇಣಿಯ ಪಶ್ಚಿಮದ ನದಿಗಳು ವೋಲ. ನದಿಯನ್ನೂ ಪೂರ್ವದ ನದಿಗಳು ಗಿನಿ ಖಾರಿಯನ್ನು ಸೇರುತ್ತವೆ. ಉತ್ತರದಲ್ಲಿ ಓಟಿ ನದಿ ಹರಿದು ವೋಲ್ಟ ನದಿಯನ್ನು ಸೇರುತ್ತದೆ.  ದಕ್ಷಿಣಕ್ಕೆ ಹರಿದು ಗಿನೀ ಖಾರಿಯನ್ನು ಸೇರುವ ನದಿ ಮಾನೋ. ಇದು ಟೋಗೋದ ಮುಖ್ಯನದಿ. ಇದರ ಹರಿವಿನಲ್ಲಿ ಜಲಪಾತಗಳು ಅಧಿಕ. ಆದ್ದರಿಂದ ಇದು ಸಂಚಾರಕ್ಕೆ ಉಪಯುಕ್ತವಲ್ಲ. ಕಾರ ಮೋಹಾಹೋ, ಸಿಯೋ-ಇವು ಇತರ ಕೆಲವು ನದಿಗಳು. 

ಇಲ್ಲಿಯ ಮಾಧ್ಯ ಉಷ್ಣತೆ 190ಅ.-220ಅ. (600ಈ. 720 ಈ). ವಾರ್ಷಿಕ ಮಳೆ ಉತ್ತರದಲ್ಲಿ 41; ಪರ್ವತ ಶ್ರೇಣಿಗಳಲ್ಲಿ 51.

ಮೊದಲು ಅರಣ್ಯ ಸಂಪತ್ತಿಗಾಗಿ ಟೋಗೋ ಬಹಳ ಪ್ರಸಿದ್ಧವಾಗಿತ್ತು. ಅತಿಬಳಕೆಯಿಂದಾಗಿ ಬಹುಪಾಲು ಅಡವಿ ಹಾಳಾಗಿವೆ. ಇಲ್ಲಿ ಜರ್ಮನರು ತಂದು ಬೆಳೆಸಿದ ತೇಗದ ಮರಗಳ ಅರಣ್ಯಗಳಿವೆ. ಉತ್ತರದ ಹುಲ್ಲುಗಾವಲುಗಳನ್ನು ಅಲ್ಲಲ್ಲಿ ಸುಟ್ಟು ವ್ಯವಸಾಯಕ್ಕೆ ಬಳಸಿಕೊಳ್ಳಲಾಗಿದೆ. ಮೊದಲಿನ ವಸಾಹತುಗಾರರು ತಂದು ಬೆಳಸಿದ ತೆಂಗಿನ ತೋಪುಗಳಿಂದ ಅಲ್ಲಿಯ ಸ್ವಾಭಾವಿಕ ಸಸ್ಯಗಳು ನಾಶವಾಗಿವೆ. ಆದರೆ ಹೆಂಡ ಇಳಿಸಲು ಬಳಸಲು ಪ್ರಯತ್ನ ನಡೆದಿದೆ. ತೆಂಗಿನ ಮರಗಳನ್ನೂ ಹೆಚ್ಚಾಗಿ ನೆಡೆಲಾಗುತ್ತಿದೆ. ಮಾನೊ ನದಿ ಹರಿಯುವ ಪ್ರಸ್ಥಭೂಮಿಯಲ್ಲಿ ಮೆಕ್ಕೆಜೋಳ, ಮರಗೆಣಸು, ಹತ್ತಿ ಮತ್ತು ಬತ್ತ ಮುಖ್ಯ ಬೆಳೆಗಳು. ಪರ್ವತಗಳ ದಕ್ಷಿಣಕ್ಕಿರುವ ಅರಣ್ಯಗಳಲ್ಲಿ ಕೋಕೋ ಮತ್ತು ಕಾಫಿ. ಒಳನಾಡಲ್ಲಿ ತೆಂಗು ಹಾಗೂ ಕಬ್ಬು. ಉತ್ತರದ ಹುಲ್ಲುಗಾಡುಗಳಲ್ಲಿ. ನೆಲಗಡಲೆ ಮತ್ತು ಬೂರುಗಹತ್ತಿ ಬೆಳೆಯುತ್ತವೆ.

ಟೋಗೋದಲ್ಲಿ 6-14 ವರ್ಷಗಳ ಮಕ್ಕಳಿಗೆ ಕಡ್ಡಾಯ ಪ್ರಾಥಮಿಕ ಶಾಲಾ ಶಿಕ್ಷಣ ಜಾರಿಯಲ್ಲಿದೆ. 1970ರಲ್ಲಿ ಇಲ್ಲಿದ್ದ ಪ್ರಾಥಮಿಕ ಶಾಲೆಗಳು 745 ; ಸೆಕೆಂಡರಿ ಶಾಲೆಗಳು 57. ಬಿನಿನ್ ವಿಶ್ವವಿದ್ಯಾಲಯ (1965) ಲೋಮೇ ನಗರದಲ್ಲಿದೆ. ತಾಂತ್ರಿಕ ಶಿಕ್ಷಣ ಕಾಲೇಜು ಸೂಕೊಡೇ ನಗರದಲ್ಲಿದೆ.

	ಟೋಗೋದ ದಕ್ಷಿಣಭಾಗದಲ್ಲಿ ವಿವಿಧ ಭಾಷೆಗಳನ್ನಾಡುವ ಸುಮಾರು 27 ಬಣಗಳಿವೆ ಆವಾ, ಮಿನ, ಡಗೋಬ, ಕಬ್ರೆ ಹಾಗೂ ಔವಚ್ಚಿ-ಇವು ಇಲ್ಲಿಯ ಪ್ರಮುಖ ಭಾಷೆಗಳು. ಫ್ರೆಂಚ್ ಇಲ್ಲಿಯ ಅಧಿಕೃತ ಆಡಳಿತ ಭಾಷೆ. 

	ಇಲ್ಲಿ ಫಾಸ್ಫೇಟ್ ಮತ್ತು ಬಾಕ್ಸೈಟ್ ಗಣಿಗಳಿವೆ. ಲೋಮೇ ಬಂದರಿನ ಮೂಲಕ ಬಹುಪಾಲು ಅದುರು ರಫ್ತಾಗುತ್ತದೆ. 

	ಲೋಮೇ ನಗರದ ಬಳಿ ಟೊಕೆಯಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಸೂಕೂಡೇ, ಸ್ಯಾನ್‍ಸ್ಯಾನ್-ಮ್ಯಾಂಗೋ ದಪ್ಯಾಂಗೋ ಮುಂತಾದೆಡೆಯಲ್ಲೂ ವಿಮಾನ ಇಳಿದಾಣಗಳುಂಟು.

	ಇತಿಹಾಸ : ಸು. 15-16ನೆಯ ಶತಮಾನಗಳಲ್ಲಿ ಪೋರ್ಚುಗೀಸರು ಗ್ರ್ಯಾಂಡ್ ಪೋಪೊ ಮತ್ತು ಪೆಟೆಟ್ ಪೋಪೊ (ಅನೀಚೊ) ಬಂದರುಗಳಲ್ಲಿ ನೆಲೆಯೂರಿ ಗುಲಾಮರ ವ್ಯಾಪಾರ ನಡೆಸುತ್ತಿದ್ದರು. ಗುಲಾಮರ ಹಡಗುಗಳಿಗೆ ಸರಬರಾಜು ಮಾಡಲು ಅವರೇ ಇಲ್ಲಿ ಮರಗೆಣಸು, ತೆಂಗು, ಮೆಕ್ಕೆಜೋಳ ಮುಂತಾದವನ್ನು ಬೆಳೆಯಲು ಪ್ರಾರಂಭಿಸಿದರು.

	1847ರಲ್ಲಿ ಜರ್ಮನ್ ಪಾದ್ರಿಗಳು ಮತ್ತು ವ್ಯಾಪಾರಿಗಳು ಏವೇ ಪ್ರದೇಶಕ್ಕೆ ಬಂದು ಅನೀಚೊದಲ್ಲಿ ನೆಲೆನಿಂತರು. 1885ರಲ್ಲಿ ಇದು ಜರ್ಮನ್ ಆರಕ್ಷಿತ ರಾಜ್ಯವಾಯಿತು. ಇದನ್ನು ಟೋಗೋಲ್ಯಾಂಡ್ ಎಂದು ಕರೆಯಲಾಯಿತು. ಇದರ ಗಡಿಗಳು ಇಂಗ್ಲೆಂಡ್ ಮತ್ತು ಫ್ರಾನ್ಸ್‍ಗಳೊಡನೆ ಮಾಡಿಕೊಂಡ ಒಪ್ಪಂದದಿಂದ ನಿರ್ಧರಿತವಾದುವು. ಕಡಲತೀರದ ಲೊಮೇ ನಗರವನ್ನು ಜರ್ಮನರು ಸ್ಥಾಪಿಸಿದರು. ರೈಲುಮಾರ್ಗಗಳನ್ನು ಹಾಕಿದರು. ನೀಗ್ರೊ ದುಡಿಮೆಯಿಂದ ಅನೇಕ ಪ್ಲಾಂಟೇಷನ್‍ಗಳಾದವು. ನುಅಟ್ಜಿ ನಗರದ ವ್ಯವಸಾಯ ಕಾಲೇಜಿನಲ್ಲಿ ಸ್ಥಳೀಯರಿಗೆ ಶಿಕ್ಷಣ ನೀಡಲಾಯಿತು. ಆಗ ಜರ್ಮನಿಗೆ ಇಲ್ಲಿಂದ ರಫ್ತಾಗುತ್ತಿದ್ದ ಸಾಮಗ್ರಿಗಳು ರಬ್ಬರ್, ಕೋಕೋ ಮತ್ತು ತೆಂಗು, ಜರ್ಮನ್ ಆಡಳಿತ ದಕ್ಷತೆಯಿಂದ ಕೂಡಿದ್ದರೂ ನೀಗ್ರೋಗಳ ಮೇಲೆ ಬಲಾತ್ಕಾರದ ದುಡಿಮೆಯನ್ನು ಹೊರಿಸಿ ಕಷ್ಟಕ್ಕೊಳಗುಮಾಡಿತ್ತು.

	ಒಂದನೆಯ ಮಹಾಯುದ್ಧ ಪ್ರಾರಂಭವಾದಾಗ ಟೋಗೋಲ್ಯಾಂಡನ್ನು ಅದರ ಪಶ್ಚಿಮದ ಗೋಲ್ಡ್ ಕೋಸ್ಟಿನ ಬ್ರಿಟಿಷ್ ವಸಾಹತು ಸೈನ್ಯಗಳೂ ಪೂರ್ವದ ದಹೋಮೀ ಫ್ರೆಂಚ್ ವಸಾಹತು ಸೈನ್ಯಗಳೂ ಆಕ್ರಮಿಸಿದವು. ಜರ್ಮನಿ ಟೋಗೋಲ್ಯಾಂಡನ್ನು ಆಕ್ರಮಣಕಾರರಿಗೆ ಷರತ್ತಿಲ್ಲದೆ ಬಿಟ್ಟುಕೊಡಬೇಕಾಯಿತು. ಅದರ ಪಶ್ಚಿಮಭಾಗ ಬ್ರಿಟಿಷರ ಆಡಳಿತಕ್ಕೂ ಪೂರ್ವಭಾಗ ಫ್ರೆಂಚರ ಆಡಳಿತಕ್ಕೂ ಒಳಪಟ್ಟವು. 1919ರ ಇಂಗ್ಲೆಂಡ್-ಫ್ರಾನ್ಸ್ ಒಪ್ಪಂದದ ಪ್ರಕಾರ ಫ್ರೆಂಚರಿಗೆ ಇಲ್ಲಿಯ ರೈಲುಮಾರ್ಗಗಳ ಮೇಲೆ ನಿಯಂತ್ರಣ ದೂರಕಿತು. 

ಚಿತ್ರ : ಸ್ವಾತಂತ್ರ್ಯದ ಸಾಂಕೇತಿಕ ಪ್ರತಿಮೆ. ಟೋಗೋದ ರಾಜಧಾನಿ ಲೋಮೆಯಲ್ಲಿದೆ. 

ಒಂದನೆಯ ಮಹಾಯುದ್ಧನಂತರ ಜರ್ಮನಿ ಟೋಗೋಲ್ಯಾಂಡಿನ ಮೇಲಣ ತನ್ನ ಪರಮಾಧಿಕಾವನ್ನು ಬಿಟ್ಟು ಕೊಟ್ಟಿತು. ರಾಷ್ಟ್ರಗಳ ಕೂಟದ (ಲೀಗ್ ಆಫ್ ನೇಷನ್ಸ್) 1922ರ ಆದೇಶದ ಪ್ರಕಾರ ಬ್ರಿಟಿಷರ ವಶದಲ್ಲಿದ್ದ ಉತ್ತರಭಾಗ ಗೋಲ್ಡ್‍ಕೋಸ್ಟಿನ ಉತ್ತರ ಪ್ರದೇಶಗಳ ಭಾಗವಾಯಿತು. ಬ್ರಿಟಿಷರು ಈ ಭಾಗದಲ್ಲಿ ಮೋಟಾರು ರಸ್ತೆಗಳನ್ನು ಏರ್ಪಡಿಸಿದ್ದರೂ ಸರಕು ಸಾಗಾಟವೆಲ್ಲ ಫ್ರೆಂಚರ ನಿಯಂತ್ರಣದಲ್ಲಿದ್ದ ರೈಲುಮಾರ್ಗಗಳ ಮೂಲಕ ನಡೆಯುತ್ತಿತ್ತು. ಫ್ರೆಂಚರಿಗೆ ಸೇರಿದ ಟೋಗೋ ಲ್ಯಾಂಡಿನ ಆಡಳಿತಕ್ಕೆ ಫ್ರೆಂಚ್ ಸರ್ಕಾರ ಕಮಿಷನರನೊಬ್ಬನನ್ನು ನೇಮಿಸಿ ಅದನ್ನು 1934ರ ವರೆಗೆ ಪ್ರತ್ಯೇಕ ಘಟಕವಾಗಿ ಇರಿಸಿಕೊಂಡಿತ್ತು.

	ಎರಡನೆಯ ಮಹಾಯುದ್ಧ ಮುಗಿದಮೇಲೆ (1945) ಬ್ರಿಟನ್ ಮತ್ತು ಫ್ರಾನ್ಸ್‍ಗಳು ತಮ್ಮ ವಶದಲ್ಲಿದ್ದ ಟೋಗೋಲ್ಯಾಂಡ್ ಪ್ರದೇಶಗಳನ್ನು ವಿಶ್ವಸಂಸ್ಥೆ ಏರ್ಪಡಿಸಿದ ನ್ಯಾಸಾಡಳಿಕ್ಕೆ ಒಪ್ಪಿಸಿದವು. ಅಷ್ಟು ಹೊತ್ತಿಗೆ ಎಚ್ಚೆತ್ತ ಆಫ್ರಿಕದಲ್ಲಿ ಯುವಜನರ ಹಾಗೂ ರಾಜಕೀಯ ಪಕ್ಷಗಳ ಚಳವಳಿ ಪ್ರಾರಂಭವಾಗಿ ಟೋಗೋಲ್ಯಾಂಡಿನ ವಿವಿಧ ಭಾಗಗಳ ಏಕೀಕರಣಕ್ಕೆ ಪ್ರಯತ್ನಗಳಾದುವು. ಜೊತೆಗೆ ಟೋಗೋಲ್ಯಾಂಡಿನ ಸ್ವಾತಂತ್ರ್ಯಕ್ಕಾಗಿಯೂ ಚಳವಳಿ ನಡೆದಿತ್ತು. 1958ರ ನವೆಂಬರ್ 14ರಂದು ವಿಶ್ವಸಂಸ್ಥೆಯ ಸಾಮಾನ್ಯಸಭೆ ಟೋಗೋಲ್ಯಾಂಡಿಗೆ ಸ್ವಾತಂತ್ರ್ಯ ನೀಡಬೇಕೆಂದು ಸಲಹೆ ಮಾಡಿತು. 1960ರ ಏಪ್ರಿಲ್ 27ರಂದು ಟೋಗೋ ಗಣರಾಜ್ಯದ ಉದಯವಾಯಿತು. ಅದರ ಪ್ರಥಮ ಅಧ್ಯಕ್ಷ ನಿಲ್ವಾನಸ್ ಒಲಿಂಪಿಯೊ.

	1963ರ ಜನವರಿ 13ರಂದು ಅಧ್ಯಕ್ಷ ಒಲಿಂಪಿಯೊ ಕೊಲೆಯಾದ್ದರಿಂದ ನಿಕೊಲಾಸ್ ಗ್ರುನಿಟ್‍ಜ್ಕಿ ಅಧ್ಯಕ್ಷನಾದ. 1967ರ ಜನವರಿ 13ರಂದು ನಡೆದ ಕ್ಪಿಪ್ರಕ್ರಾಂತಿಯಲ್ಲಿ ಗ್ರುನಿಟ್‍ಜ್ಕಿಯನ್ನು ಪದಚ್ಯುತಗೊಳಿಸಿ ಲೆಫ್ಟೆನೆಂಟ್ ಕರ್ನಲ್ ಏಯಾಡೆಮ ಅಧ್ಯಕ್ಷನಾದ. ಈತನ ಸೈನಿಕ ಆಡಳಿತದಲ್ಲಿ ಸಂವಿಧಾನ ರದ್ದಾಗಿ. ರಾಜಕೀಯ ಪಕ್ಷಗಳನ್ನು ನಿಷೇಧಿಸಲಾಯಿತು. 1970ರಲ್ಲಿ ಟೋಗೋ ಜನತಾ ಪಕ್ಷದ ಸ್ಥಾಪನೆಯಾಗಿ, ಜನಾಭಿಪ್ರಾಯದಂತೆ ಏಯಾಡೆಮ ಕಾಯಂ ಅಧ್ಯಕ್ಷನಾದ.
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ